ಪೋರ್ಚುಗೀಸ್ ಗಿನಿ - 
 ಪಶ್ಷಿಮ ಆಫ್ರಿಕ ತೀರದಲ್ಲಿರುವ ಪೋರ್ಚುಗೀಸ್ ಸಾಗರೋತ್ತರ ಪ್ರಾಂತ್ಯ.  ತ್ರಿಕೋಣಾಕಾರದಲ್ಲಿರುವ ಈ ಪ್ರಾಂತ್ಯವನ್ನು ವಿಶ್ವಸಂಸ್ಥೆ ಸ್ವಯಮಾಡಳಿತವಿಲ್ಲದ ಪ್ರದೇಶವೆಂದು ಪರಿಗಣಿಸಿದೆ.  ಇದು ಉ.ಅ. 10052'-12014' ಮತ್ತು ಪ.ರೇ. 13038'-16043'  ನಡುವೆ ಇದೆ.  ಇದರ ಉತ್ತರದಲ್ಲಿ ಸೆನಗಾಲ್, ಪೂರ್ವ ಹಾಗೂ ದಕ್ಷಿಣದಲ್ಲಿ ಗಿನಿ ಗಣರಾಜ್ಯ ಮತ್ತು ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಇವೆ.  ಇದರ ಸಮೀಪದಲ್ಲಿರುವ ವಿಷಗಾಸ್ ದ್ವೀಪಸ್ತೋಮ ಮತ್ತು ಇತರ ದ್ವೀಪಗಳೂ ಪೋರ್ಚುಗೀಸ್ ಗಿನಿಯ ಆಡಳಿತಕ್ಕೆ ಒಳಪಟ್ಟಿವೆ.  ವಿಸ್ತೀರ್ಣ 36,125 ಚ.ಕಿ.ಮೀ. ಜನಸಂಖ್ಯೆ ಸುಮಾರು 5,30,000 (1970) ರಾಜಧಾನಿ ಬಿಸ್ಸಾವು.

	ಭೌತಲಕ್ಷಣ : ಪ್ರಾಂತ್ಯದ ಬಹುಭಾಗ ತಗ್ಗಿನಲ್ಲಿರುವ ಜೌಗಿನಿಂದ ಕೂಡಿದೆ.  ಪ್ರದೇಶದ ಅತ್ಯುನ್ನತ ಪ್ರದೇಶ ಆಗ್ನೇಯ ಭಾಗದಲ್ಲಿ ಸುಮಾರು 244 ಮೀ ಎತ್ತರದಲ್ಲಿದೆ.  ಪೋರ್ಚುಗೀಸ್ ಗಿನಿಗೆ ಸೇರಿದ ದ್ವೀಪಗಳಲ್ಲಿ ಪ್ರಮುಖವಾದವು ಕಯೋ, ಪೆಸಿಕ್ಸ್, ಬಿಸ್ಸಾವು, ಏರಿಯೀಸ್, ಬೋಲಾಮ, ಕೋಮಾ ಮತ್ತು ಮೆಲೊ ಹಿಂದೆ ಪೋರ್ಚುಗೀಸರು ಒಳಭಾಗಕ್ಕೆ ಹೋಗುವ ಮೊದಲು ತಂಗುದಾಣವಾಗಿ ಈ ದ್ವೀಪಗಳನ್ನು ಉಪಯೋಗಿಸುತ್ತಿದ್ದರು.  1890 ರಿಂದ 1941 ರ ವರೆಗೆ ಬೊಲಾಮ ದ್ವೀಪದಲ್ಲಿನ ಬೊಲಾಮ ಇದರ ರಾಜಧಾನಿಯಾಗಿದ್ದಿತು.  ಇಲ್ಲಿಗೆ ದೂರದಲ್ಲಿರುವ ವಿಷಗಾಸ್ ದ್ವೀಪಗಳು ಅನೇಕ ವರ್ಷಗಳ ಕಾಲ ಆಫ್ರಿಕನ್ ಕಡಲ್ಗಳ್ಳರ ನೆಲೆಗಳಾಗಿದ್ದವು.  ಇವು ದಟ್ಟವಾದ ಕಾಡುಗಳಿಂದ ಕೂಡಿದ್ದರಿಂದ ಕಡಲ್ಗಳ್ಳರು ಇಲ್ಲಿ ಅವಿತುಕೊಂಡಿದ್ದು ಮುಖ್ಯ ಭೂಪ್ರದೇಶದ ಹಾಗೂ ನಾವಿಕರ ಮೇಲೆ ದಾಳಿ ಮಾಡುತ್ತಿದ್ದರು.  ವಿಷಗಾಸ್ ದ್ವೀಪಸ್ತೋಮದ ದ್ವೀಪಗಳಲ್ಲಿ ಪ್ರಮುಖವಾದವು ಬೈಬಾಕ್, ರೂಬೇನ್, ಅರಂಗೋಜಿನೊ, ರೋಕ್ಸಾ, ಗಾಲಿನಾಸ್, ಮೈಯೋ, ಪೊಯಿಲಾವೊ, ಉನೋ, ಅರಾಂಗೋ ಮತ್ತು ಉರಾಕೇನ್, ಪೋರ್ಚುಗೀಸ್ ಗಿನಿಯ ನದಿಗಳಲ್ಲಿ ಚಪ್ಪಟೆ ತಳದ ದೋಣಿಗಳ ಸಂಚಾರ ಸಾಧ್ಯವಿದೆ.  ಪ್ರಮುಖ ನದಿಗಳು ಸೆನಗಾಲ್, ಗೇಬಾ, ಕಾಜೆವು, ಮನಸೋವ, ಕೋರುಬಲ್, ರೀಯೋಗ್ರ್ಯಾಂಡ್ ಡಿ ಬುಬಾ ಮತ್ತು ಕ್ಯಾಸೈನ್.

	ವಾಯುಗುಣ. ಸಸ್ಯ ಪ್ರಾಣಿ ಸಂಪತ್ತು : ಇಲ್ಲಿಯ ವಾಯುಗುಣ ಸೆಕೆ ಮತ್ತು ತೇವದಿಂದ ಕೂಡಿದ್ದು, ಮೇ ಯಿಂದ ಅಕ್ಟೋಬರ್‍ವರೆಗೆ ಮಳೆಗಾಲ. ನವೆಂಬರ್‍ನಿಂದ ಏಪ್ರಿಲ್‍ವರೆಗೆ ಒಣಹವೆ ಇರುತ್ತದೆ.  ತೀರ ಪ್ರದೇಶದಲ್ಲಿ ಮಾನ್‍ಸೂನ್ ವಾಯುಗುಣವಿರುತ್ತದೆ.  ಉತ್ತರ ಭಾಗದಲ್ಲಿ ವರ್ಷಕ್ಕೆ 1,916 ಮಿ.ಮೀ. ವರೆಗೆ ಮಳೆಯಾಗುತ್ತದೆ. ಒಳಭಾಗದ್ದು ಸಮಾನ ಮಾದರಿಯ ವಾಯುಗುಣ.  ಇಲ್ಲಿಯ ಮಳೆ ಹಾಗೂ ಉಷ್ಣತೆಯಲ್ಲಿ ತೀವ್ರ ಏರುಪೇರುಗಳಿರುತ್ತವೆ.  ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸರಾಸರಿ ಉಷ್ಣತೆ 290ಅ  ಡಿಸೆಂಬರ್ ಮತ್ತು ಜನವರಿ ಚಳಿ ತಿಂಗಳುಗಳು.  ಆಗಿನ ಸರಾಸರಿ ಉಷ್ಣತೆ ಸುಮಾರು 230ಅ.

ಈ ಪ್ರಾಂತ್ಯದಲ್ಲಿ ಮೂರು ಸಸ್ಯ ವಲಯಗಳಿವೆ.  ತೀರದ ಜವುಗು ನೆಲ ಮತ್ತು ಬಯಲು ನೆಲ ಒಂದು ವಲಯ.  ಇಲ್ಲಿ ಗುಲ್ಮ ಮತ್ತು ತಾಳೆ ಮರಗಳು ಬೆಳೆಯುತ್ತವೆ.  ಕೆಲವು ಕಡೆ ಬತ್ತವನ್ನು ಬೆಳೆಯುತ್ತಾರೆ.  ಒಳಭಾಗದ ಬಯಲು ಎರಡನೆಯ ವಲಯ.  ಇದು ದಟ್ಟವಾದ ಕಾಡುಗಳಿಂದ ಕೂಡಿದೆ.  ಮೂರನೆಯದು ಸವಾನ ಹುಲ್ಲುಗಾವಲು ವಲಯ.  ಪೋರ್ಚುಗೀಸ್ ಗಿನಿಯಲ್ಲಿ ಪೆಲಿಕನ್, ಫ್ಲೆಮಿಂಗೋ, ಮೊಸಳೆ, ಹಾವು, ಕಾಡೆಮ್ಮೆ, ಗಜೆಲ್, ಜಿಂಕೆ, ಚಿರತೆ ಮತ್ತು ಹಲವು ಬಗೆಯ ಕಡಲು ಹಕ್ಕಿಗಳೂ ಇವೆ.  ಸಿಂಹಗಳು ಅಪರೂಪವಾಗಿ ಕಾಣಸಿಗುತ್ತವೆ.  ನದಿಯ ಅಳಿವೆಗಳಲ್ಲಿ ಶಾರ್ಕ್‍ಗಳಿವೆ.
ಆರ್ಥಿಕತೆ : ಪೋರ್ಚುಗೀಸ್ ಗಿನಿಯ ಆರ್ಥಿಕತೆ ಕೃಷಿ ಮತ್ತು ಪಶು ಸಂಪತ್ತನ್ನು ಅವಲಂಬಿಸಿದೆ.  1963 ರಿಂದ ಪೋರ್ಚುಗೀಸ್ ಆಡಳಿತದ ವಿರುದ್ಧ ಆಫ್ರಿಕನ್ ರಾಷ್ಟ್ರೀಯರು ನಡೆಸುತ್ತಿರುವ ಗೆರಿಲಾ ಹೋರಾಟದ ಕಾರಣದಿಂದ ದೇಶದ ಆರ್ಥಿಕ ಪರಿಸ್ಥಿತಿ ತುಂಬ ಅವ್ಯವಸ್ಥೆಗೆ ಈಡಾಗಿದೆ.  ಯುದ್ಧಕ್ಕೆ ಮೊದಲೂ ಇಲ್ಲಿಯ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ.  ಆಫ್ರಿಕನ್ ರೈತರು ತಮ್ಮ ಬೆಳೆಯನ್ನು ಯೂರೋಪಿಯನ್ ಕಂಪನಿಗಳ ಸ್ಥಳೀಯ ಮುತಾಲಿಕರಿಗೆ ಮಾರುತ್ತಾರೆ.  ಅಕ್ಕಿ ಇಲ್ಲಿಯ ಮುಖ್ಯ ಆಹಾರ.  ಸರಕು, ದ್ವೀಪಗಳಲ್ಲಿ ಹಾಗೂ ತೀರಪ್ರದೇಶದಲ್ಲಿ ಬತ್ತದ ಜೊತೆಗೆ ತಾಳೆಯ ಎಣ್ಣೆಯನ್ನೂ ಉತ್ಪಾದಿಸಲಾಗುತ್ತದೆ.  ಫರೀಮ್ ಮತ್ತು ನೋವಾಲಾಮೆಗೊಗಳ ಸುತ್ತ ಮುಸ್ಲಿಮರು ನೆಲಗಡಲೆ ಬೆಳೆಯುತ್ತಾರೆ.  ಆರ್ಥಿಕವಾಗಿ ಇದು ಪ್ರಮುಖ ಬೆಳೆ.  ಇದರ ರಫ್ತು ದೇಶದ ಒಟ್ಟು ರಫ್ತಿನ ಸೇ. 60 ರಷ್ಟಿದೆ.  ಇಲ್ಲಿಂದ ರಫ್ತಾಗುವ ಕೆಲವು ಸರಕುಗಳು ಮರ, ತೆಂಗು, ಜೇನುಮೇಣ ಮತ್ತು ಚರ್ಮ.

ಕೈಗಾರಿಕಾ ಕ್ಷೇತ್ರದಲ್ಲಿ ಪೋರ್ಚುಗೀಸ್ ಗಿನಿ ಅತ್ಯಂತ ಹಿಂದುಳಿದಿದೆ.  ಬಿಸಾವಿನಲ್ಲಿ ಕೆಲವು ತೈಲ ಸಂಸ್ಕರಣ ಕೇಂದ್ರಗಳಿವೆ.  ಇಲ್ಲಿ ತೈಲ ಹಾಗೂ ಬಾಕ್ಸೈಟ್ ಅದುರಿನ ನಿಕ್ಷೇಪ ಹೆಚ್ಚಾಗಿದ್ದರೂ ಇದರ ಪರಿಶೋಧನಾ ಕಾರ್ಯ ಕುಂಠಿತವಾಗಿದೆ.  ಇಲ್ಲಿಯ ಇತರ ಕೆಲವು ಕೈಗಾರಿಕೆಗಳೆಂದರೆ ನೆಲಗಡಲೆ, ಅಕ್ಕಿ, ರಬ್ಬರ್, ಕಬ್ಬು, ಇವುಗಳ ಸಂಸ್ಕರಣ ; ಸಾಬೂನು, ಕಾಗದ, ಸೆರಾಮಿಕ್ ಮತ್ತು ಇಟ್ಟಿಗೆ ತಯಾರಿಕೆ.  ಯುದ್ಧದಿಂದಾಗಿ ವರ್ಷೇವರ್ಷೆ ಇದರ ಆಮದು ಹೆಚ್ಚುತ್ತಿದೆ.  ರಫ್ತು ಇಳಿಯುತ್ತಿದೆ.  ಪೋರ್ಚುಗಲ್ಲಿನ ಧನಸಹಾಯವನ್ನು ಇದು ವಿಶೇಷವಾಗಿ ಅವಲಂಬಿಸಬೇಕಾಗಿದೆ.  ಪೋರ್ಚುಗೀಸ್ ಗಿನಿಯಲ್ಲಿ ರೈಲು ಮಾರ್ಗಗಳಿಲ್ಲ.  ನೆಲಗಡಲೆ ಹಾಗೂ ಇತರ ಸರಕುಗಳನ್ನು ನದಿಗಳ ಮೇಲೆ ಸಾಗಿಸಲಾಗುತ್ತದೆ.  ದೋಣಿಗಳ ಮೇಲೆ ಗೆರಿಲಾಗಳು ಅನೇಕ ವೇಳೆ ದಾಳಿ ನಡೆಸುತ್ತಾರೆ.  1966 ರಲ್ಲಿ ಇಲ್ಲಿದ್ದ ರಸ್ತೆಗಳ ಒಟ್ಟು ಉದ್ದ ಕೇವಲ 3,040 ಕಿ.ಮೀ. ದೇಶದ ಪ್ರಮುಖ ಹೆದ್ದಾರಿ ಬಿಸಾವಿನಿಂದ ಬಾಗಟವರೆಗೆ ಇದೆ.  ಇಲ್ಲಿರುವ ಏಕೈಕ ಆಧುನಿಕ ಬಂದರು ಬಿಸಾವಿನಲ್ಲಿದೆ.  ಇಲ್ಲಿ ವರ್ಷಕ್ಕೆ 100 ಕ್ಕೂ ಹೆಚ್ಚು ಹಡಗುಗಳು ಲಂಗರು ಹಾಕುತ್ತವೆ.  ಮತ್ತು 20,000 ಟನುಗಳಷ್ಟು ಸರಕನ್ನು ಇದರ ಮೂಲಕ ಸಾಗಿಸಲಾಗುತ್ತದೆ.  ಈ ಬಂದರಿನಿಂದ ಪೋರ್ಚುಗಲ್, ಅಂಗೋಲ, ಕೇಪ್‍ವರ್ಡ್ ಹಾಗೂ ಮೋಜಂಬೀಕ್‍ಗೆ ಹಡಗುಗಳು ಹೋಗಿಬರುತ್ತವೆ.  ರೀಯೊಕಾಚೆವೂ ಮೇಲಿನ ಬೀಂಡಾದಲ್ಲಿ ಇನ್ನೊಂದು ಬಂದರಿದೆ.  ಬಿಸಾವಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ.  ಇಲ್ಲಿಂದ ಲಿಸ್ಬನ್ ಹಾಗೂ ಕೇಪ್‍ವರ್ಡ್ ದ್ವೀಪಗಳಿಗೆ ವಿಮಾನ ಸಂಚಾರವಿದೆ. ಬಾಗಟ, ನೋವಾ, ಲೊಮೇಗೊ ಮುಂತಾದ ಪ್ರಮುಖ ಪಟ್ಟಣಗಳಲಿ ಸೈನಿಕ ವಿಮಾನ ನಿಲ್ದಾಣಗಳಿವೆ.  ಗೆರಿಲಾ ದಾಳಿಯಿಂದಾಗಿ ರಸ್ತೆ ಪ್ರಯಾಣ ಸುರಕ್ಷಿತವಾಗಿಲ್ಲ.  ಆದ್ದರಿಂದ ಪ್ರಯಾಣಿಕರು ವಿಮಾನಗಳನ್ನು ಹೆಚ್ಚಾಗಿ ಅವಲಂಬಿಸುತ್ತಾರೆ.

ಆಡಳಿತ : ಪೋರ್ಚುಗೀಸ್ ಗಿನಿಯ ಆಡಳಿತ ರಾಜ್ಯಪಾಲನ ಕೈಯಲ್ಲಿದೆ.  ಪೋರ್ಚುಗೀಸ್ ಸೈನ್ಯದ ಜನರಲನನ್ನು ಸಾಮಾನ್ಯವಾಗಿ ರಾಜ್ಯಪಾಲನಾಗಿ ನೇಮಕ ಮಾಡಲಾಗುತ್ತದೆ.  ಇವನ ಸಹಾಯಕ್ಕೆ ಒಬ್ಬ ಮಹಾ ಕಾರ್ಯದರ್ಶಿ ಇರುತ್ತಾನೆ.  ಇಲ್ಲಿ ವಿಧಾನಸಭೆಯಿದೆ.  ಇದರದು ನಿಯಮಿತ ಅಧಿಕಾರ, ಅದೂ ಸಲಹಾತ್ಮಕ. ಇದರಲ್ಲಿ 14 ಜನ ಸದಸ್ಯರಿರುತ್ತಾರೆ.  3 ಸದಸ್ಯರು ನೇರವಾಗಿ ಚುನಾಯಿತರಾಗುತ್ತಾರೆ.  ಆಡಳಿತದಲ್ಲಿ ರಾಜ್ಯಪಾಲನಿಗೆ ಸಲಹೆ ನೀಡಲು ಸರ್ಕಾರದ ಮಂಡಲ ಇದೆ.  ಇದರಲ್ಲಿ ಹಿರಿಯ ಅಧಿಕಾರಿಗಳು, ಭೂ ನೌಕಾ ವಾಯು ಸೇನಾ ವಿರಿಷ್ಠರು ಮತ್ತು ವಿಧಾನ ಸಭೆಯಿಂದ ಚುನಾಯಿತರಾದ ಮೂವರು ಸದಸ್ಯರಿರುತ್ತಾರೆ.  ಅನಕ್ಷರಸ್ಥರಿಗೆ ಮತದಾನದ ಹಕ್ಕಿಲ್ಲ.  ಪೋರ್ಚುಗೀಸ್ ರಾಷ್ಟ್ರೀಯ ಸಭೆ ಪೋರ್ಚುಗೀಸ್ ಕಾರ್ಪೊರೇಟಿವ್ ಚೇಂಬರ್ ಮತ್ತು ಪೋರ್ಚುಗೀಸ್ ಸಾಗರೋತ್ತರ ಮಂಡಲಿಗಳಲ್ಲಿ ಪೋರ್ಚುಗೀಸ್ ಗಿನಿಯ ಪ್ರತಿನಿಧಿಗಳು ಇರುತ್ತಾರೆ.  ಪ್ರಾಂತ್ಯವನ್ನು ಪೌರವಿಭಾಗಗಳಾಗಿ ವಿಂಗಡಿಸಲಾಗಿದೆ.  ಇವಲ್ಲದೆ 3 ವಿಭಾಗಗಳಿವೆ.  ಅವಕ್ಕೆ ಪೋರ್ಚುಗೀಸ್ ಆಡಳಿತಗಾರರಿದ್ದಾರೆ.

ಸಾಮಾಜಿಕ ಸ್ಥಿತಿಗತಿ : ಪೋರ್ಚುಗೀಸ್ ಗಿನಿಯನ್ನು ಪೋರ್ಚುಗೀಸರು 1446 ರಲ್ಲಿ ಕಂಡರು.  17 ಹಾಗೂ 18 ನೆಯ ಶತಮಾನಗಳಲ್ಲಿ ಇಲ್ಲಿ ಗುಲಾಮರ ವ್ಯಾಪಾರ ಬಹಳ ಬಿರುಸಿನಿಂದ ನಡೆಯುತ್ತಿತ್ತು.  ಅಂತರ್ಯುದ್ಧದ ಕಾರಣ ಇಲ್ಲಿಯ ಜನಜೀವನ ಈಗ ಅಸ್ತವ್ಯಸ್ತವಾಗಿದೆ.

ಇಲ್ಲಿ ಅನೇಕ ಬುಡಕಟ್ಟುಗಳಿಗೆ ಸೇರಿದ ಜನರು ನೆಲಸಿದ್ದಾರೆ.  ಬಲಾಂಟಿಗಳು ಸೇ. 30 ರಷ್ಟಿದ್ದಾರೆ.  ಇವರಲ್ಲದೆ ಫುಲಾನಿ (20%), ಮಂಡ್ಯಾಕೋ (14%), ಮಾಲಿಂತೆ (12.5%), ಪೆಪಲ್ (7%), ಇತರರು (16.5%) ಇದ್ದಾರೆ.  ಇವರಲ್ಲಿ ಬಲಾಂಟಿಗಳು ವಿಸ್ತರಣಾಕಾಂಕ್ಷಿಗಳಾಗಿದ್ದು ರಾಷ್ಟ್ರೀಯತಾವಾದಿಗಳಾಗಿದ್ದಾರೆ. ಫುಲಾನಿಗಳು, ಮುಸ್ಲಿಮರು, ಸಂಪ್ರದಾಯವಾದಿಗಳು ಬದಲಾವಣೆಗೆ ಇವರು ವಿರೋಧಿಗಳು.  ಇವರು ತಮ್ಮ ಮುಖಂಡರ ಹತೋಟಿಗೆ ಸಂಪೂರ್ಣವಾಗಿ ಒಳಪಟ್ಟಿದ್ದಾರೆ.  ಪೋರ್ಚುಗೀಸ್ ಸಂಸ್ಕøತಿ ಇವರ ಮೇಲೆ ಯಾವ ಪ್ರಭಾವವನ್ನೂ ಬೀರಿಲ್ಲ.  ತಮ್ಮ ಧರ್ಮ ಹಾಗೂ ಸಂಪ್ರದಾಯಗಳಿಗೆ ರಾಷ್ಟ್ರೀಯತೆಯಿಂದ ಅಪಾಯವೆಂದು ಇವರು ಭಾವಿಸಿರುವುದರಿಂದ ಗೆರಿಲಾಗಳಿಗೆ ವಿರೋಧಿಗಳಾಗಿ ಪೋರ್ಚುಗೀಸರ ಮಿತ್ರರಾಗಿದ್ದಾರೆ.  ಮಾಲಿಂತೆಗಳು ವಿಶೇಷವಾಗಿ ವ್ಯವಸಾಯ ವ್ಯಾಪಾರಗಳಲ್ಲಿ ನಿರತರಾಗಿದ್ದಾರೆ.  ಮಂಡ್ಯಾಕೋಗಳು ತಾಳೆ ವ್ಯವಸಾಯದಲ್ಲಿ ಅನುಭವಿಗಳು.  ಪೋರ್ಚುಗೀಸ್ ಸಂಸ್ಕøತಿಯನ್ನು ಅವಲಂಬಿಸಿರುವ ಕೆಲವು ಸಾವಿರ ಜನರು ಸರ್ಕಾರಿ ನೌಕರರಾಗಿದ್ದಾರೆ.  ಇಲ್ಲಿ ಪೋರ್ಚುಗೀಸರ ಸಂಖ್ಯೆ ಹೆಚ್ಚಾಗಿಲ್ಲ.  ಆದರೆ, ಸುಮಾರು 35,000 ಪೋರ್ಚುಗೀಸರ ಸೈನ್ಯ ಇಲ್ಲಿ ಶಾಶ್ವತವಾಗಿ ನೆಲೆಗೊಂಡಿದೆ.  ಇಲ್ಲಿಯ ಪ್ರಮುಖ ಧರ್ಮ ಇಸ್ಲಾಂ.  2 ಲಕ್ಷಕ್ಕೂ ಹೆಚ್ಚು ಜನ ಋ ಧರ್ಮಾವಲಂಬಿಗಳು.  ಇದಲ್ಲದೆ 26,500 ಕ್ಯಾತೊಲಿಕರೂ ಇದ್ದಾರೆ.  ಇಲ್ಲಿ ಪ್ರಾಟೆಸ್ಟಂಟರು ಇಲ್ಲ.

ಶಿಕ್ಷಣ ಕ್ಷೇತ್ರದಲ್ಲಿ ತೀವ್ರ ಬದಲಾವಣೆಯಾಗುತ್ತಿದ್ದರೂ ಇದು ಹಿಂದುಳಿದಿದೆಯೆಂದೇ ಹೇಳಬಹುದು.  1956 ರಲ್ಲಿ ಇಲ್ಲಿಯ ಆಫ್ರಿಕನರಲ್ಲಿ ಶೇ. 99.7 ರಷ್ಟು ಅನಕ್ಷರಸ್ಥರಿದ್ದರು.  1968 ರ ವೇಳೆಗೆ ಇಲ್ಲಿ 76 ಕ್ಯಾತೊಲಿಕ್ ಶಾಲೆಗಳೂ, ಸೈನಿಕರಿಂದ ನಡೆಸಲ್ಪಡುವ 48 ಶಾಲೆಗಳೂ 47 ಸರ್ಕಾರಿ ಶಾಲೆಗಳೂ ಇದ್ದವು.  ಇಲ್ಲಿ ಉಚ್ಚ ಶಿಕ್ಷಣ ಸಂಸ್ಥೆಗಳಾವುವೂ ಇಲ್ಲ.  ವಿದ್ಯಾರ್ಥಿಗಳು ಪೋರ್ಚುಗಲ್ಲಿಗೆ ಹೋಗಿ ವ್ಯಾಸಂಗ ಮಾಡಲು ವೇತನಗಳಿವೆ.  ರಾಷ್ಟ್ರೀಯತಾವಾದಿಗಳು ವಿದ್ಯಾರ್ಥಿಗಳನ್ನು ರಷ್ಯ ಹಾಗೂ ಪೂರ್ವ ಯೂರೋಪಿಗೆ ವ್ಯಾಸಂಗಕ್ಕೆ ಕಳುಹಿಸುತ್ತಾರೆ.  ಬಿಸ್ಲಾವಿನಲ್ಲಿ ಒಂದು ವಸ್ತು ಸಂಗ್ರಹಾಲಯವೂ ಒಂದು ಗ್ರಂಥಾಲಯವೂ ಇವೆ.

ಇಲ್ಲಿಯ ರಾಷ್ಟ್ರೀಯತಾವಾದಿಗಳ ನಾಯಕನಾಗಿದ್ದು, ಕೊನಾಕ್ರೆಯಲ್ಲಿ 1973 ರಲ್ಲಿ ಕೊಲೆಯಾದ ಅಮಿಲ್ದಾರ್ ಕಬ್ರಾಲನ ಅನುಯಾಯಿಗಳೂ ಅನೇಕ ಆಸ್ಪತ್ರೆ, ಶಾಲೆ ಹಾಗೂ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.  ಅವರು ಜನರನ್ನು ಸಮಾಜವಾದದತ್ತ ಒಲಿಸಲು ಪ್ರಯತ್ನಿಸುತ್ತಿದ್ದಾರೆ.  ಅವರ ಪ್ರಭಾವವನ್ನು ತಡೆಗಟ್ಟಲು ಪೋರ್ಚುಗೀಸರು ಗ್ರಾಮಾಭಿವೃದ್ಧಿ ಯೋಜನೆಯನ್ನು ಕೈಗೊಂಡಿದ್ದಾರೆ.  ಅಂತರ್ಯುದ್ಧದ ಕಾರಣ ಪೋರ್ಚುಗೀಸ್ ಗಿನಿಯ ಭವಿಷ್ಯ ಅನಿಶ್ಚಿತವಾಗಿದೆ.
										(ಕೆ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ